ಅರ್ಥಶಾಸ್ತ್ರ
''ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ''
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India)
ಪೀಠಿಕೆ :- ಪ್ರತಿಯೊಂದು ದೇಶವೂ ಒಂದು ಕೇಂದ್ರ ಬ್ಯಾಂಕ್ ನ್ನು ಹೊಂದಿರುತ್ತದೆ. ಕೇಂದ್ರ ಬ್ಯಾಂಕ್ ದೇಶದ ಹಣಕಾಸಿನ ವ್ಯವಸ್ಥೆಯ ಉನ್ನತ ಸಂಸ್ಥೆಯಾಗಿರುತ್ತದೆ. ಕೇಂದ್ರ ಬ್ಯಾಂಕನ್ನು ಭಾರತದಲ್ಲಿ ನಾವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಕರೆಯುತ್ತೇವೆ.
ರಿಸರ್ವ್ ಬ್ಯಾಂಕ್ ಸ್ಥಾಪನೆಯ ಹಿನ್ನಲೆ :- ಮೊದಲನೇ ಜಾಗತಿಕ ಯುದ್ಧದ ನಂತರ ಹಲವಾರು ದೇಶಗಳು ಆರ್ಥಿಕ ತೊಂದರೆ ಅನುಭವಿಸಿದವು ಅದರಲ್ಲಿ ಭಾರತವೂ ಒಂದು. ಈ ಆರ್ಥಿಕ ತೊಂದರೆಯನ್ನು ನಿವಾರಿಸಲು ಮತ್ತು ಹಣಕಾಸಿನ ವ್ಯವಸ್ಥೆಯನ್ನು ಬಲಪಡಿಸಲು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು " The Problem Of The Rupees Its Origin And Its Solution " ಎಂಬ ಪುಸ್ತಕದಲ್ಲಿ ವಿವರಿಸಿದರಿಂದ ಹಿಲ್ಟನ್ ಯಂಗ್ ಸಮಿತಿಯು 1926 ರಲ್ಲಿ ರಾಯಲ್ ಕಮಿಷನ್ ನೇಮಿಸಲಾಯಿತು.
ಈ ಕಮಿಷನ್ ಆಧಾರದ ಮೇಲೆ 1934 ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾನೂನಿನ ಅನ್ವಯ ಖಾಸಗಿ ಶೇರುದಾರರ ಬ್ಯಾಂಕಾಗಿ ಐದು ಕೋಟಿ ರೂಪಾಯಿ ಷೇರು ಬಂಡವಾಳದೊಂದಿಗೆ 1935 ಏಪ್ರಿಲ್ 01 ರಂದು ಕೋಲ್ಕತ್ತಾ ದಲ್ಲಿ ಸ್ಥಾಪಿಸಲಾಯಿತು. ಸ್ವಾತಂತ್ರ್ಯದ ನಂತರ ಭಾರತ ಸರ್ಕಾರದ 1949 ರ ಜನವರಿ 1 ರಂದು RBI ನ್ನು ರಾಷ್ಟ್ರೀಕರಣ ಮಾಡಿ ಭಾರತದ ಕೇಂದ್ರ ಬ್ಯಾಂಕ್ ಆಗಿ ಪರಿವರ್ತಿಸಲಾಯಿತು.
ಭಾರತ ಸರ್ಕಾರ ಜವರಲಾಲ್ ನೆಹರು ಅವರ ನಾಯಕತ್ವದಲ್ಲಿ ಕೇಂದ್ರೀಕೃತ ಯೋಜನ ನೀತಿಗಳನ್ನು ಅನುಷ್ಠಾನಗೊಳಿಸಲು ಮುಂದಾಯಿತು ಅದರಲ್ಲಿ ಕೃಷಿ ಅಭಿರುದ್ದಿ ಪ್ರಮುಖ ಉದ್ದೇಶವಾಗಿತ್ತು. ಇದಕ್ಕಾಗಿ ಸಾಕಷ್ಟು ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಯಿತು. 1949 ರಲ್ಲಿ ಬ್ಯಾಂಕುಗಳ ನಿಯಂತ್ರಣ ಕಾಯ್ದೆ ಜಾರಿಗೆ ತಂದು ವಾಣಿಜ್ಯ ಬ್ಯಾಂಕ್ ಗಳ ಸ್ಥಾಪನೆ ಮತ್ತು ರಾಷ್ಟ್ರೀಕರಣಕ್ಕೆ ಒತ್ತು ನೀಡಿ ಬಂಡವಾಳ ಸಂಗ್ರಹಕ್ಕೆ ಮುಂದಾಯಿತು.
RBI ಆಡಳಿತ ಮಂಡಳಿ :- ಭಾರತೀಯ ರಿಸರ್ವ್ ಬ್ಯಾಂಕ್ 20 ಜನ ಸದಸ್ಯರನ್ನು ಒಳಗೊಂಡ ಕೇಂದ್ರ ನಿರ್ದೇಶಕ ಮಂಡಳಿಯ ಮೇಲ್ವಿಚಾರಣೆ ಹಾಗೂ ನಿಯಂತ್ರಣಕ್ಕೊಳಪಟ್ಟಿದೆ. ಈ ಮಂಡಳಿಯಲ್ಲಿ ಭಾರತ ಸರ್ಕಾರದಿಂದ 5 ವರ್ಷಗಳ ಅವಧಿಗಾಗಿ ನೇಮಕಗೊಂಡ ಒಬ್ಬ ಗವರ್ನರ್ ಹಾಗೂ ನಾಲ್ವರು ಉಪ-ಗವರ್ನರ್ ರು ಇರುತ್ತಾರೆ.
ಮುಂಬೈ, ಕೋಲ್ಕತ್ತಾ, ಚೆನ್ನೈ ಹಾಗೂ ದೆಹಲಿಯಲ್ಲಿರುವ ನಾಲ್ಕು ಪ್ರಾದೇಶಿಕ ಮಂಡಳಿಗಳಿಂದ ತಲಾ ಒಬ್ಬರಂತೆ ನಾಲ್ಕು ಜನ ನಿರ್ದೇಶಕರನ್ನು ನೇಮಿಸಲಾಗುತ್ತದೆ.
ಹತ್ತು ಜನ ನಿರ್ದೇಶಕರನ್ನು ಸರ್ಕಾರವು ವಿವಿಧ ಕ್ಷೇತ್ರಗಳಿಂದ ನಾಮಕರಣ ಮಾಡುತ್ತದೆ. ಭಾರತ ಸರ್ಕಾರದ ಹಣಕಾಸು ಸಚಿವಾಲಯದಿಂದ ಒಬ್ಬ ನಿರ್ದೇಶಕನನ್ನು ನೇಮಿಸಲಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಕಚೇರಿಯು ಮುಂಬೈನಲ್ಲಿದೆ. ಇದಲ್ಲದೆ ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ದೆಹಲಿಯಲ್ಲಿ ಒಂದೊಂದರಂತೆ ಒಟ್ಟು ನಾಲ್ಕು ಪ್ರಾದೇಶಿಕ ಕಛೇರಿಗಳಿವೆ. ರಿಸರ್ವ್ ಬ್ಯಾಂಕಿನ ಶಾಖೆಗಳನ್ನು ಬೆಂಗಳೂರು, ಹೈದೆರಾಬಾದ್, ಕಾನ್ಪುರ್, ಲಕ್ನೋ ಮುಂತಾದ ಕಡೆಗಳಲ್ಲಿ ಸ್ಥಾಪಿಸಲಾಗಿದೆ.
ರಿಸರ್ವ್ ಬ್ಯಾಂಕಿನ ಕಾರ್ಯಗಳು (Functions Of Reserve Bank) :-
1. ಸಾಂಪ್ರದಾಯಿಕ ಕಾರ್ಯಗಳು.
2. ಅಭಿವೃದ್ಧಿ ಕಾರ್ಯಗಳು.
3. ಇತರ ಕಾರ್ಯಗಳು.
1. ಸಾಂಪ್ರದಾಯಿಕ ಕಾರ್ಯಗಳು :-
A. ನೋಟು ಚಲಾವಣೆ ಪರಮಾಧಿಕಾರ ( Monopoly of note issue )
ಭಾರತೀಯ ರಿಸರ್ವ್ ಬ್ಯಾಂಕ್ ಕಾನೂನಿನ 22ನೇ ಪರಿಛೇದ ಅಡಿಯಲ್ಲಿ ಈ ಬ್ಯಾಂಕ್ 10, 20, 50, 100, 500 ಹಾಗೂ 1000 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಚಲಾವಣೆಗೆ ತರುವ ಏಕಸ್ವಾಮ್ಯ ಅಧಿಕಾರವನ್ನು ಹೊಂದಿದೆ.
1956 ರಿಂದ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವಾಗ ಕನಿಷ್ಠ ಮೀಸಲು ಪದ್ಧತಿಯನ್ನು ಅನುಸರಿಸುತ್ತದೆ. ಈ ಪದ್ಧತಿಯ ಪ್ರಕಾರ ರಿಸರ್ವ್ ಬ್ಯಾಂಕ್ ಕನಿಷ್ಠ 200 ಕೋಟಿ ರೂಪಾಯಿ ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ವಿದೇಶಿ ವಿನಿಮಯವನ್ನು ಭದ್ರತೆಯಾಗಿ ಮೀಸಲಿಡಬೇಕಾಗುತ್ತದೆ. ಇದರಲ್ಲಿ ಕನಿಷ್ಠ 115 ಕೋಟಿ ರೂಪಾಯಿ ಮೌಲ್ಯದ ಬಂಗಾರ 85 ಕೋಟಿ ರೂಪಾಯಿ ಮೌಲ್ಯದ ವಿದೇಶಿ ವಿನಿಮಯದ ಭದ್ರತೆ ಇರಬೇಕಾಗುತ್ತದೆ.
ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವಾಗ ರಿಸರ್ವ್ ಬ್ಯಾಂಕ್ ಏಕರೂಪತೆ (uniformity) ಸ್ಥಿತಿ ಸ್ಥಾಪಕತೆ (elasticity) ಹಾಗೂ ಭದ್ರತೆ (security)ಯ ತತ್ವಗಳನ್ನು ಅನುಸರಿಸುತ್ತದೆ.
ಒಂದು ರೂಪಾಯಿ ನೋಟು ಮತ್ತು ಇತರ ನಾಣ್ಯಗಳನ್ನು ಸರ್ಕಾರದ( ಕೇಂದ್ರ ಸರ್ಕಾರ ವಿತ್ತ ಸಚಿವಾಲಯ ) ಪರವಾಗಿ ರಿಸರ್ವ್ ಬ್ಯಾಂಕ್ ಟಂಕಿಸುತ್ತದೆ.
B. ಸರ್ಕಾರದ ಬ್ಯಾಂಕ್ ( Government Bank ) :-
ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ಬ್ಯಾಂಕಾಗಿ ಪ್ರತಿನಿಧಿಯಾಗಿ ಮತ್ತು ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತದೆ. ವಾಣಿಜ್ಯ ಬ್ಯಾಂಕುಗಳು ತಮ್ಮ ಗ್ರಾಹಕರಿಗಾಗಿ ನಿರ್ವಹಿಸುವ ಕಾರ್ಯಗಳಂತೆ ರಿಸರ್ವ್ ಬ್ಯಾಂಕ್ ಸರ್ಕಾರದ ಠೇವಣಿಗಳನ್ನು ಸ್ವೀಕರಿಸುತ್ತದೆ ಹಾಗೂ ಸರ್ಕಾರಕ್ಕೆ ಅವಶ್ಯಕತೆ ಇದ್ದಾಗ ಸಾಲ ನೀಡುತ್ತದೆ.
ಅದು ಸರ್ಕಾರದ ಪರವಾಗಿ ಹಣವನ್ನು ಸ್ವೀಕರಿಸುವ ಹಾಗೂ ಪಾವತಿಸುವ ಕಾರ್ಯವನ್ನು ಮಾಡುತ್ತದೆ. ಸರ್ಕಾರದ ಹಣವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾಗೂ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡುತ್ತದೆ.
ಅಂತಾರಾಷ್ಟ್ರೀಯ ಸಂಸ್ಥೆಗಳಾದ IMF, ವಿಶ್ವಬ್ಯಾಂಕ್ ಮುಂತಾದವುಗಳಲ್ಲಿ ರಿಸರ್ವ್ ಬ್ಯಾಂಕ್ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತದೆ.
ವಿದೇಶಿ ವಿನಿಮಯ ನೀತಿ, ಹಣಕಾಸು ನೀತಿ ಯೋಜನೆ ಮತ್ತು ಆಯವ್ಯಯ ನೀತಿ ಮುಂತಾದವುಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಉಪಯುಕ್ತ ಸಲಹೆಗಳನ್ನು ರಿಸರ್ವ್ ಬ್ಯಾಂಕ್ ನೀಡುತ್ತದೆ. ಅದು ಸಾರ್ವಜನಿಕ ಸಾಲ ನಿರ್ವಹಣೆ ಕಾರ್ಯವನ್ನು ಮಾಡುತ್ತದೆ.
C. ಬ್ಯಾಂಕುಗಳ ಬ್ಯಾಂಕ್ (Banker's bank ) :-
ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ವಾಣಿಜ್ಯ ಬ್ಯಾಂಕುಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ ಹಾಗೂ ನಿರ್ದೇಶಿಸುತ್ತದೆ. ಬ್ಯಾಂಕ್ ಚಟುವಟಿಕೆಗಳ ನಿಯಂತ್ರಣವು ಲೈಸೆನ್ಸ್ ನೀಡುವುದು, ಶಾಖಾ ವಿಸ್ತರಣೆ, ಸ್ವತ್ತುಗಳ ದ್ರವ್ಯತೆ ಮುಂತಾದವುಗಳಿಗೆ ಸಂಬಂಧಿಸಿದೆ.
ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ತನ್ನ ಒಟ್ಟು ಠೇವಣಿ ಗಳ ನಿಗದಿತ ಭಾಗವನ್ನು ನಗದು ಮೀಸಲು ಹಣ ರೂಪದಲ್ಲಿ ಕಾಣಬೇಕಾಗುತ್ತದೆ. ರಿಸರ್ವ್ ಬ್ಯಾಂಕಿನ ಬಳಿ ಇರುವ ನಗದು ಮೀಸಲು ಹಣವು ವಾಣಿಜ್ಯ ಬ್ಯಾಂಕುಗಳಿಗೆ ಹಣಕಾಸಿನ ತೊಂದರೆಗಳಿರುವ ಸಮಯಗಳಲ್ಲಿ ಸಹಾಯ ಕಾರಿಯಾಗುತ್ತದೆ. ಅದರಂತೆ ವಾಣಿಜ್ಯ ಬ್ಯಾಂಕುಗಳ ಹುಂಡಿಗಳನ್ನು(bills) ವಟಾಯಿಸುವ ಮೂಲಕ ಹಾಗೂ ಹಲವಾರು ಭದ್ರತೆಗಳ ಆಧಾರದ ಮೇಲೆ ಮುಂಗಡ ಗಳನ್ನು ನೀಡುವ ಮೂಲಕ ರಿಸರ್ವ್ ಬ್ಯಾಂಕ್ ಸಾಲವನ್ನು ಒದಗಿಸುತ್ತದೆ.
D. ಅಂತಿಮ ಋಣದಾತ ( Lender of last resort ) : -
ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಹಣಕಾಸಿನ ತೊಂದರೆಗಳು ಇದ್ದಾಗ ಸಹಾಯ ಮಾಡುತ್ತದೆ. ವಾಣಿಜ್ಯ ಬ್ಯಾಂಕುಗಳಿಗೆ ಯಾವುದೇ ಮೂಲದಿಂದ ಹಣಕಾಸಿನ ಸಹಾಯ ದೊರಕದಿದ್ದಾಗ ಭಾರತೀಯ ರಿಸರ್ವ್ ಬ್ಯಾಂಕ್ ಅವುಗಳ ನೆರವಿಗೆ ದಾವಿಸುತ್ತದೆ.
ವಾಣಿಜ್ಯ ಬ್ಯಾಂಕುಗಳು ಸಾಲ ಪಡೆಯಲು ರಿಸರ್ವ್ ಬ್ಯಾಂಕಿನ ಬಳಿ ಹೋಗಬಹುದಾಗಿದೆ. ವಿನಿಮಯ ಅಥವಾ ಸರಕಾರಿ ಬದ್ರತೆಗಳನ್ನು ಮರು ವಟಾಯಿಸುವ ಮೂಲಕ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಗಳಿಗೆ ಸಾಲ ಸೌಲಭ್ಯ ನೀಡುತ್ತದೆ.
ಕೇಂದ್ರ ಬ್ಯಾಂಕಿನ ಈ ಕಾರ್ಯವು ವಾಣಿಜ್ಯ ಬ್ಯಾಂಕುಗಳನ್ನು ದಿವಾಳಿಯಾಗುವುದರಿಂದ ರಕ್ಷಿಸುತ್ತದೆ. ಹೀಗೆ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಎಲ್ಲ ರೀತಿಯ ಖಾತ್ರಿ ಭರವಸೆ ಒದಗಿಸುವುದರ ಜೊತೆಗೆ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬಲಿಷ್ಠ ಹಾಗೂ ಒಳ್ಳೆಯ ಬ್ಯಾಂಕಿಂಗ್ ವ್ಯವಸ್ಥೆ ನೆಲೆಗೊಳ್ಳುವಂತೆ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.
E. ತೀರುವ ಮನೆ ಕಾರ್ಯ(Clearing house) :-
ಭಾರತೀಯ ರಿಸರ್ವ್ ಬ್ಯಾಂಕ್ ತೀರುವ ಮನೆಯಾಗಿ ಬ್ಯಾಂಕುಗಳ ತಮ್ಮ ದೈನಂದಿನ ವ್ಯವಹಾರಗಳಲ್ಲಿ ಪರಸ್ಪರ ನೀಡಬೇಕಾದ ಮತ್ತು ತೆಗೆದುಕೊಳ್ಳಬೇಕಾದ ಹಣಕಾಸಿನ ವ್ಯವಹಾರ ಹಾಗೂ ವರ್ಗಾವಣೆ ಕಾರ್ಯಗಳನ್ನು ನಿರ್ವಹಿಸುತ್ತದೆ.
ರಿಸರ್ವ್ ಬ್ಯಾಂಕ್ ಎಲ್ಲಾ ವಾಣಿಜ್ಯ ಬ್ಯಾಂಕುಗಳ ಮೀಸಲು ನಿಧಿಯನ್ನು ತನ್ನ ಬಳಿ ಹೊಂದಿರುವುದರಿಂದ ವಾಣಿಜ್ಯ ಬ್ಯಾಂಕುಗಳಿಗೆ ಪರಸ್ಪರ ಕೊಂಡುಕೊಳ್ಳುವ ವ್ಯವಹಾರ ಅಥವಾ ಹಣದ ವರ್ಗಾವಣೆ ಕಾರ್ಯಗಳನ್ನು ರಿಸರ್ವ್ ಬ್ಯಾಂಕಿನ ಮೂಲಕ ಈಡೇರಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಹೀಗೆ ಅಂತರ ಬ್ಯಾಂಕ್ ಸಾಲದ ವ್ಯವಹಾರ ಗಳನ್ನು ನಗದು ಹಣದ ಬಳಕೆ ಇಲ್ಲದೆ ಪೂರ್ಣಗೊಳಿಸುವುದು ಸಾಧ್ಯವಾಗುತ್ತದೆ.
F. ಹಣದ ಮಾರುಕಟ್ಟೆ ನಿರ್ಧಾರ (Leader of money market ):-
ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಹಣದ ಮಾರುಕಟ್ಟೆಯ ನೇತಾರನಾಗಿರುತ್ತದೆ. ಹಣದ ಮಾರುಕಟ್ಟೆಯ ವಿವಿಧ ಘಟಕಗಳಾದ ವಾಣಿಜ್ಯ ಬ್ಯಾಂಕುಗಳು, ಹಣಕಾಸಿನ ಸಂಸ್ಥೆಗಳು ಮುಂತಾದವುಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.
G. ಸಾಲ ನಿಯಂತ್ರಕ ( Controller of credit ) :-
ಸಾಲ ನಿಯಂತ್ರಣವು ರಿಸರ್ವ್ ಬ್ಯಾಂಕಿನ ಪ್ರಮುಖವಾದ ಕಾರ್ಯವಾಗಿದೆ. ಸಾಲ ನೀಡಿಕೆ ಹಾಗೂ ಸಾಲದ ಬಳಕೆಗಳು ಯೋಗ್ಯ ಪ್ರಮಾಣ ಹಾಗೂ ಯೋಗ್ಯ ದಿಶೆಯಲ್ಲಿರಬೇಕಾಗುತ್ತದೆ.
ಈ ಉದ್ದೇಶಕ್ಕಾಗಿ ರಿಸರ್ವ್ ಬ್ಯಾಂಕ್ ಸಾಲ ನಿಯಂತ್ರಣ ಕ್ರಮಗಳು ಆದ ಬ್ಯಾಂಕ್ ದರ ಮುಕ್ತ ಮಾರುಕಟ್ಟೆ ವ್ಯವಹಾರ, ಮೀಸಲು ಹಣದ ಅನುಪಾತದಲ್ಲಿ ಬದಲಾವಣೆ ಹಾಗೂ ಆಯ್ಕೆಯ ಪತ್ತಿನ ವಿಧಾನ ಮುಂತಾದವುಗಳನ್ನು ಅನುಸರಿಸುತ್ತದೆ. ಹಣದ ಪೂರೈಕೆ ಹಾಗೂ ಸಾಲಗಳನ್ನು ನಿಯಂತ್ರಿಸುವ ಮೂಲಕ ರಿಸರ್ವ್ ಬ್ಯಾಂಕ್ ಬೆಲೆ, ಬಡ್ಡಿದರ ಮುಂತಾದ ಆರ್ಥಿಕ ಚಲಕಗಳನ್ನು ನಿಯಂತ್ರಿಸುತ್ತದೆ.
H. ವಿದೇಶ ವಿನಿಮಯದ ಸಂರಕ್ಷಕ (Custodian of foreign exchange reserves):-
ಭಾರತೀಯ ರಿಸರ್ವ್ ಬ್ಯಾಂಕ ದೇಶದ ವಿದೇಶಿ ವಿನಿಮಯ ಸಂಗ್ರಹದ ಸಂರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ.
ನೋಟುಗಳ ಮುದ್ರಣಕ್ಕೆ ಭದ್ರತೆ ಒದಗಿಸುವುದರ ಜೊತೆಗೆ ಅಂತರಾಷ್ಟ್ರೀಯ ಪಾವತಿ ಕಾರ್ಯಗಳನ್ನು ಪೂರ್ಣಗೊಳಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಚಿನ್ನ-ಬೆಳ್ಳಿ ಹಾಗೂ ವಿದೇಶಿ ವಿನಿಮಯದ ಸಂಗ್ರಹವನ್ನು ಹೊಂದುವ ಅವಶ್ಯಕತೆ ಇರುತ್ತದೆ. ಆದ್ದರಿಂದ ವಿನಿಮಯ ದರಗಳನ್ನು ಕಾಪಾಡಬೇಕಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಿ ವಿನಿಮಯ ಸಂಗ್ರಹ ನಿಯಂತ್ರಣ ಹಾಗೂ ಮೇಲ್ವಿಚಾರಣೆ ಮಾಡುವ ಸಲುವಾಗಿ ಒಂದು ಪ್ರತ್ಯೇಕವಾದ ನಿಯಂತ್ರಣ ವಿಭಾಗವನ್ನು ಹೊಂದಿದೆ.
2. ಅಭಿವೃದ್ಧಿ ಕಾರ್ಯಗಳು( Developmental functions):-
A. ಕೃಷಿ ಹಣಕಾಸು (Agricultural finance ):-
ಭಾರತೀಯ ರಿಸರ್ವ್ ಬ್ಯಾಂಕ್ ಕೃಷಿ ಅಭಿವೃದ್ಧಿಗಾಗಿ ಸಹಕಾರಿ ಪತ್ತಿನ ಸಂಘಗಳಿಗೆ ಹಣಕಾಸಿನ ನೆರವು ಹಾಗೂ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಈ ಉದ್ದೇಶಕ್ಕಾಗಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಹಣಕಾಸನ್ನು ಪೂರೈಸುವ ಸಲುವಾಗಿ ಕೃಷಿ ಸಾಲ ವಿಭಾಗ ಹಾಗೂ ಪ್ರತ್ಯೇಕ ನಿಧಿಯ ವ್ಯವಸ್ಥೆಯನ್ನು ರಿಸರ್ವ್ ಬ್ಯಾಂಕ್ ಮಾಡಿದೆ.
ಈಗ ಈ ಭಾಗದ ಕಾರ್ಯ ಮತ್ತು ನಿಧಿಯನ್ನು ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗೆ (NABARD ) ವರ್ಗಾಯಿಸಲಾಗಿದೆ.
B. ಕೈಗಾರಿಕಾ ಹಣಕಾಸು ( Industrial finance ):-
ಭಾರತೀಯ ರಿಸರ್ವ್ ಬ್ಯಾಂಕ್ ಸಣ್ಣ ಆಗುವುದು ಕೈಗಾರಿಕೆಗಳಿಗೆ ರಾಜ್ಯ ಹಣಕಾಸು ನಿಗಮಗಳು (SFC), I. F. C. I., I. D. B. I., I.C.I.C.I., ಮುಂತಾದವುಗಳ ಮೂಲಕ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ. ಅದರಂತೆ ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸಿನ ಸಹಾಯ ಒದಗಿಸಲು 1964 ರಾಷ್ಟ್ರೀಯ ಕೈಗಾರಿಕಾ ಸಾಲ ನಿಧಿ ( National industrial credit fund ) ಯನ್ನು ಸ್ಥಾಪಿಸಿದೆ.
3. ಇತರ ಕಾರ್ಯಗಳು (Other functions) :-
A. ಸಂಶೋಧನಾ ಕಾರ್ಯಗಳು (Research functions) :-
ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕ ವ್ಯವಸ್ಥೆಯ ಕೃಷಿ, ಕೈಗಾರಿಕೆ, ಹಣಕಾಸು ವಲಯ, ಆಯಾತ ನಿರ್ಯಾತ ಬ್ಯಾಂಕಿಂಗ್ ವ್ಯವಸ್ಥೆ, ಹಣದ ಮಾರುಕಟ್ಟೆ ಹಾಗೂ ಬಂಡವಾಳ, ಮಾರುಕಟ್ಟೆಯ ಬೆಲೆಗಳ ಸ್ಥಿತಿಗತಿ ಮುಂತಾದವುಗಳ ಕುರಿತು ಮಾಹಿತಿಗಳನ್ನು ಸಂಗ್ರಹಿಸಿ ಪ್ರಕಟಿಸುತ್ತದೆ. ಇಂಥ ಮಾಹಿತಿಗಳ ಆಧಾರದ ಮೇಲೆ ಸರ್ಕಾರವು ತನ್ನ ಆರ್ಥಿಕಮತ್ತು ಹಣಕಾಸಿನ ನೀತಿಗಳನ್ನು ರೂಪಿಸಿ ಜಾರಿಗೆಗೊಳಿಸಬಹುದಾಗಿದೆ. ಇದರ ಜೊತೆಗೆ ರಿಸರ್ವ್ ಬ್ಯಾಂಕ್ ಕೆಲವು ವಿಶೇಷ ಹೊತ್ತಿಗೆಗಳು, ಲಘು ಪ್ರಕಟಣೆಗಳು ಹಾಗೂ ವಿವಿಧ ಸಂಶೋಧನಾ ಪತ್ರಿಕೆಗಳನ್ನು ಹೊರಡಿಸುತ್ತದೆ.
B. ವಿಶೇಷ ಕಾರ್ಯಗಳು ( Spicel Functions):-
ರಿಸರ್ವ್ ಬ್ಯಾಂಕ್ ಹಲವಾರು ವಿಷಯಗಳ ಕುರಿತು ವಿಶೇಷ ಚರ್ಚಾಕೂಟಗಳನ್ನು ಹಾಗೂ ಸೆಮಿನಾರುಗಳನ್ನು ಏರ್ಪಡಿಸುತ್ತದೆ. ಅದು ಬ್ಯಾಂಕ್ ಸಿಬ್ಬಂದಿಗೆ ತರಬೇತಿ ಸೌಲಭ್ಯಗಳನ್ನು ಒದಗಿಸುತ್ತದೆ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುತ್ತದೆ. ಬಡತನ, ನಿರುದ್ಯೋಗ, ಅತಿಪ್ರಸರಣ, ಅನುಪ್ರಸರಣ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕ್ರಮಗಳನ್ನು ಅದು ಸೂಚಿಸುತ್ತದೆ.
ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಪಟ್ಟಿ :-
1. ಸರ್ ಓಸ್ಬೋರ್ನ್ ಸ್ಮಿತ್ 1 ಜನವರಿ 1935 ರಿಂದ 30 ಜೂನ್ 1937 ರವರೆಗೆ
2. ಸರ್ ಜೇಮ್ಸ್ ಟೇಲರ್ 1 ಜುಲೈ 1937 ರಿಂದ 17 ಫೆಬ್ರವರಿ 1943 ರವರೆಗೆ
3. ಸರ್ ಸಿ ಡಿ ದೇಶ್ಮುಖ್ 11 ಆಗಸ್ಟ್ 1943 ರಿಂದ 30 ಜೂನ್ 1949 ರವರೆಗೆ
4. ಸರ್ ಬೆನೆಗಲ್ ರಾಮ ರೌ 1 ಜುಲೈ 1949 ರಿಂದ 14 ಜನವರಿ 1957 ರವರೆಗೆ
5. ಕೆ ಜಿ ಅಂಬೆಗಾಂವ್ಕರ್ 14 ನೇ ಜನವರಿ 1957 ರಿಂದ 28 ಫೆಬ್ರವರಿ 1957 ರವರೆಗೆ
6. ಎಚ್ ವಿ ಆರ್ ಅಯಂಗಾರ್ 1 ಮಾರ್ಚ್ 1957 ರಿಂದ 28 ಫೆಬ್ರವರಿ 1962 ರವರೆಗೆ
7. ಪಿ ಸಿ ಭಟ್ಟಾಚಾರ್ಯ 1 ಮಾರ್ಚ್ 1962 ರಿಂದ 30 ಸೆಪ್ಟೆಂಬರ್ 1967 ರವರೆಗೆ
8. ಎಲ್ ಕೆ ಝಾ 1 ಜುಲೈ 1967 ರಿಂದ 3 ಮೇ 1970
9. ಬಿ ಎನ್ ಅಡಾರ್ಕರ್ 4 ಮೇ 1970 ರಿಂದ 15 ಜೂನ್ 1970 ರವರೆಗೆ
10. ಎಸ್ ಜಗನ್ನಾಥನ್ 16 ಜೂನ್ 1970 ರಿಂದ 19 ಮೇ 1975 ರವರೆಗೆ
11. ಎನ್ ಸಿ ಸೇನ್ ಗುಪ್ತಾ 19 ಮೇ 1975 ರಿಂದ 19 ಆಗಸ್ಟ್ 1975 ರವರೆಗೆ
12. ಕೆ ಆರ್ ಪುರಿ 20 ಆಗಸ್ಟ್ 1975 ರಿಂದ 2 ಮೇ 1977 ರವರೆಗೆ
13. ಎಂ ನರಸಿಂಹಂ 2 ಮೇ 1977 ರಿಂದ 30 ನವೆಂಬರ್ 1977 ರವರೆಗೆ
14. ಡಾ. ಐ ಜಿ ಪಟೇಲ್ 1 ಡಿಸೆಂಬರ್ 1977 ರಿಂದ 15 ಸೆಪ್ಟೆಂಬರ್ 1982 ರವರೆಗೆ
15. ಡಾ. ಮನಮೋಹನ್ ಸಿಂಗ್ 16 ಸೆಪ್ಟೆಂಬರ್ 1982 ರಿಂದ 14 ಜನವರಿ 1985 ರವರೆಗೆ
16. ಎ ಘೋಷ್ 15 ಜನವರಿ 1985 ರಿಂದ 4 ಫೆಬ್ರವರಿ 1985 ರವರೆಗೆ
17. ಆರ್ ಎನ್ ಮಲ್ಹೋತ್ರಾ 4 ಫೆಬ್ರವರಿ 1985 ರಿಂದ 22 ಡಿಸೆಂಬರ್ 1990 ರವರೆಗೆ
18. ವೆಂಕಿತರಮಣನ್ 22 ಡಿಸೆಂಬರ್ 1990 ರಿಂದ 21 ಡಿಸೆಂಬರ್ 1992 ರವರೆಗೆ
19. ಡಾ. ಸಿ ರಂಗರಾಜನ್ 22 ಡಿಸೆಂಬರ್ 1992 ರಿಂದ 21 ನವೆಂಬರ್ 1997 ರವರೆಗೆ
20. ಡಾ. ಬಿಮಲ್ ಜಲನ್ 22 ನವೆಂಬರ್ 1997 ರಿಂದ 6 ಸೆಪ್ಟೆಂಬರ್ 2003 ರವರೆಗೆ
21. ಡಾ. ವೈ ವಿ ರೆಡ್ಡಿ 6 ಸೆಪ್ಟೆಂಬರ್ 2003 ರಿಂದ 5 ಸೆಪ್ಟೆಂಬರ್ 2008 ರವರೆಗೆ
22. ಡಾ. ಡಿ. ಸುಬ್ಬರಾವ್ 5 ಸೆಪ್ಟೆಂಬರ್ 2008 ರಿಂದ 4 ಸೆಪ್ಟೆಂಬರ್ 2013 ರವರೆಗೆ
23. ಡಾ.ರಘುರಾಮ್ ರಾಜನ್ 4 ಸೆಪ್ಟೆಂಬರ್ 2013 ರಿಂದ 4 ಸೆಪ್ಟೆಂಬರ್ 2016
24. ಡಾ.ಉರ್ಜಿತ್ ಆರ್. ಪಟೇಲ್ 4 ಸೆಪ್ಟೆಂಬರ್ 2016 ರಿಂದ 11 ಡಿಸೆಂಬರ್ 2018
25. ಶಕ್ತಿಕಾಂತ ದಾಸ್ 12 ಡಿಸೆಂಬರ್ 2018 ರಿಂದ ಇಲ್ಲಿಯವರೆಗೆ.
ಉಪಸಂಹಾರ :- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟಾರೆಯಾಗಿ ದೇಶದ ಆರ್ಥಿಕ ಚಟುವಟಿಕೆಗಳ ನಿಯಂತ್ರಕನಾಗಿಯು , ಸರ್ಕಾರ ದ ಮತ್ತು ಖಾಸಗಿ ಬ್ಯಾಂಕ್ ಗಳ ಸಹಾಯಕನಾಗಿವು ಕೆಲಸ ಮಾಡುವುದರಿಂದ ದೇಶದ ಆರ್ಥಿಕ ಚಟುವಟಿಕೆಗಳು ಮೇಲೆ ಪರಿಣಾಮ ಬೀರಿ ದೇಶವು ಅಭಿರುದ್ದಿ ಹೊಂದುವಲ್ಲಿ ರಿಸರ್ವ್ ಬ್ಯಾಂಕ್ ನ ಸಾಧನೆ ಅತೀ ಮುಖ್ಯವಾಗಿದೆ.
ಕೃಷ್ಣ ನಾಯಕ್ ಸಿರಿಗೇರಿ.......
Post a Comment
0 Comments
Happy Friendship Day...... My Dear Friends.. !